ಉತ್ತರ ಟೋಕಿಯೊದ ಫುಕುಶಿಮಾದಲ್ಲಿನ ನ್ಯೂಕ್ಲಿಯರ್ ಘಟಕವೊಂದರಲ್ಲಿ ಶನಿವಾರ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಅಣು ವಿಕಿರಣಗಳು ಹೊರಸೂಸುತ್ತಿರುವುದಾಗಿ ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಭವಿಸಿದ 8.9ರಷ್ಟು ಪ್ರಮಾಣದ ಭಾರಿ ಭೂಕಂಪಕ್ಕೆ ಅಣು ರಿಯಾಕ್ಟರ್ ಘಟಕದ ಮೇಲ್ಛಾವಣಿ ಕುಸಿದಿದ್ದು, ಆದರೆ ಅಣು ವಿಕಿರಣ ಸೋರಿಕೆಯ ಹೆದರಿಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಏತನ್ಮಧ್ಯೆ ಅಣು ರಿಯಾಕ್ಟರ್ ಘಟಕ ಸ್ಫೋಟಗೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಅಣು ಸ್ಥಾವರದಲ್ಲಿನ ಘಟನೆ ಕುರಿತಂತೆ ಹಾಗೂ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸುತ್ತಿದ್ದೇವೆ. ನಂತರ ನಾವು ಆ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಿಸುವುದಾಗಿ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಯೂಕಿಯೋ ಎಡಾನೋ ತಿಳಿಸಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ನ್ಯೂಕ್ಲಿಯರ್ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಜಪಾನ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಹತ್ತು ಮೀಟರ್ ಎತ್ತರ ರಕ್ಕಸ ಅಲೆಗಳ ಸುನಾಮಿಯಿಂದಾಗಿ ಹಲವು ಹಳ್ಳಿಗಳು ಕೊಚ್ಚಿ ಹೋಗಿವೆ. ಘಟನೆಯಲ್ಲಿ ಸುಮಾರು 1,300ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಶುಕ್ರವಾರ ಸಂಭವಿಸಿದ 8.8 ತೀವ್ರತೆಯ ಭಾರೀ ಭೂಕಂಪದಿಂದಾಗಿ ಕರಾವಳಿ ಪ್ರದೇಶದಲ್ಲಿ ಎದ್ದ ರಕ್ಕಸಗಾತ್ರದ ಸುನಾಮಿ ಅಲೆಗಳಿಗೆ ಸಾವಿರಾರು ಕಟ್ಟಡಗಳು ಜಲಸಮಾಧಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.ಭಾರೀ ಸುನಾಮಿಯಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಸಾವು-ನೋವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸುಮಾರು 20 ಅಡಿ ಎತ್ತರದ ಅಲೆಗಳಿಂದಾಗಿ ಸಾವಿರಾರು ಕಟ್ಟಡಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿವೆ.
ಉತ್ತರ ಜಪಾನ್‌ನ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ 8.8 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಸಮುದ್ರದಾಳದಲ್ಲಿ ಎದ್ದ ಭಾರೀ ಸುನಾಮಿ ಹೊಡೆತಕ್ಕೆ ಕಟ್ಟಡ, ಕಾರು, ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ.ದೇಶದ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ರೈಲು, ವಿಮಾನ ಸೇವೆ ಸ್ಥಗಿತಗೊಂಡಿದೆ. ಕಳೆದ 15 ವರ್ಷಗಳಲ್ಲಿನ ಅತ್ಯಂತ ದೊಡ್ಡ ಭೂಕಂಪ ಇದು ಎಂದು ಭೂಗರ್ಭಶಾಸ್ತ್ರ ತಜ್ಞರು ತಿಳಿಸಿದ್ದಾರೆ. ಉತ್ತರ-ಕರಾವಳಿ ಟೋಕಿಯೋದಿಂದ 250 ಕಿಲೋ ಮೀಟರ್ ದೂರದ ಕರಾವಳಿ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದೆ.
ಇಂಡೋನೇಷಿಯಾ, ಹವಾಯ್ ದ್ವೀಪ, ಫಿಲಿಫೈನ್ಸ್‌ನಲ್ಲಿಯೂ ಸುನಾಮಿ ಭೀತಿ ಎದುರಾಗಿದ್ದು, ರಷ್ಯಾದಲ್ಲಿಯೂ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿದೆ. ಜಪಾನ್ ದೇಶದ ಐದು ಅಣುಸ್ಥಾವರವನ್ನು ಬಂದ್ ಮಾಡಲಾಗಿದೆ. ತೈಲ ಘಟಕಗಳು ಹೊತ್ತಿ ಉರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.