ಈ ಯುವತಿ ವಿಶ್ವದ ಅತೀ ಕಿರಿಯ ಅಜ್ಜಿ......
ನಂಬಿದ್ರೆ ನಂಬಿ...ಬಿಟ್ಟರೆ ಬಿಡಿ...ರುಮೇನಿಯಾದ 23ರ ಹರೆಯದ ಯುವತಿಯೊಬ್ಬಳು ವಿಶ್ವದ ಅತೀ ಕಿರಿಯ ಅಜ್ಜಿ ಎಂಬುದಾಗಿ ಹೇಳಿಕೊಂಡಿದ್ದಾಳೆಂದು ಮಾಧ್ಯಮದ ವರದಿಯೊಂದು ತಿಳಿಸಿದೆ!.
ತನ್ನ 12ನೇ ವಯಸ್ಸಿಗೆ ಮೊದಲ ಪುತ್ರಿ ಮಾರಿಯಾ ಜನಿಸಿರುವುದಾಗಿ ಹೇಳಿಕೊಂಡಿರುವ ಎರಡು ಮಕ್ಕಳ ತಾಯಿ ರಿಫ್ಕಾ ಸ್ಟಾನೆಸ್ಕೂ ತಾನು ಈಗ ಜಗತ್ತಿನ ಅತೀ ಕಿರಿಯ ಅಜ್ಜಿಯಾಗಿದ್ದೇನೆ ಎಂದಿದ್ದಾಳೆ. ತಾಯಿಯಂತೆ ಮಗಳು ಕೂಡ ಅಮ್ಮನ ಹಾದಿ ಹಿಡಿಯುವ ಮೂಲಕ ತನ್ನ ತಾಯಿಗೆ ಜಗತ್ತಿನ ಕಿರಿಯ ಅಜ್ಜಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗುವಂತೆ ಮಾಡಿದ್ದಾಳೆ.
ಇದೀಗ ಆಕೆಯ ಪುತ್ರಿ ಮಾರಿಯಾ (11) ಗಂಡು ಮಗುವಿಗೆ ಜನನ ನೀಡಿರುವುದಾಗಿ ದಿ ಸನ್ ಪತ್ರಿಕೆ ವರದಿ ಮಾಡಿದೆ. ರಿಫ್ಕಾ 11 ವರ್ಷದವಳಿದ್ದಾಗ ತನ್ನ ತಂದೆ ಬೇರೊಬ್ಬನ ಜತೆ ಮದುವೆ ಮಾಡುತ್ತಾನೆ ಎಂಬ ಭಯದಿಂದಾಗಿ ಮನೆಯಿಂದ ಓಡಿಹೋಗಿ ಆಭರಣ ಮಾರಾಟಗಾರನಾಗಿದ್ದ 13 ವರ್ಷದ ಐಯೊನೆಲ್ ಸ್ಟಾನೆಸ್ಕೂ ಎಂಬಾತನನ್ನು ವಿವಾಹವಾಗಿದ್ದಳು. ಒಂದು ವರ್ಷದ ನಂತರ ಮಗಳು ಮಾರಿಯಾ ಹಾಗೂ ತದನಂತರ ಪುತ್ರ ನಿಕೋಲೆ ಹುಟ್ಟಿರುವುದಾಗಿ ಆಕೆ ವಿವರಿಸಿದ್ದಾಳೆಂದು ವರದಿ ಹೇಳಿದೆ.
ಯುವ ತಾಯಿ ರಿಫ್ಕಾ ತನ್ನ ಮಗಳು ಶಾಲೆಗೆ ಹೋಗಲಿ ಎಂಬುದಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಳಂತೆ. ಆದರೆ ಮಾರಿಯಾ ಮದುವೆಯಾಗುವುದಾಗಿ ಹಠ ಹಿಡಿದ ಪರಿಣಾಮ ಹತ್ತನೇ ವಯಸ್ಸಿಗೆ ಆಕೆಗೆ ಮದುವೆ ಮಾಡಿಸಲಾಯಿತು. ಈಗ ಮಗಳಿಗೆ ಗಂಡು ಮಗು ಜನಿಸಿರುವುದಾಗಿ ಸನ್ ವರದಿ ವಿವರಿಸಿದೆ.
ಈ ಹಿಂದೆ ಬ್ರಿಟನ್‌ನ 26 ವರ್ಷದ ತರುಣಿಯೊಬ್ಬಳು ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಅಜ್ಜಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಳು. ಆಕೆಯ ಮಗಳು ತನ್ನ 12 ವಯಸ್ಸಿನಲ್ಲಿ ತಾಯಿಯಾಗಿದ್ದು ಈಕೆ 1999ರಲ್ಲಿ ಸುದ್ದಿಯಾಗಿದ್ದಳು. ಇದೀಗ 10 ವರ್ಷಗಳ ನಂತರ ಈ ದಾಖಲೆಯನ್ನು ರಿಫ್ಕಾ ಮುರಿದಿದ್ದಾಳೆ!